"ನಾ ಹೋಗಲಾರೆ, ನನ್ನನ್ನು ಪುನ: ಯಾಕೆ ಅಲ್ಲಿಗೆ ಕಳಿಸ್ತೀರಾ? ಚಿಂದಿ ಚಾಪೆ, ತುತ್ತು ಅನ್ನ ಕೊಟ್ಟರೆ ಸಾಕು, ಇಲ್ಲೇ ಇರುವೆನು" ಎಂದು ಆ ವೃದ್ಧೆ ಹೇಳಿದಾಗ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಕೂಡಾ ಒಂದು ಕ್ಷಣ ವಿಚಲಿತರಾದರು. ಒಲ್ಲದ ಮನಸ್ಸಿನಿಂದ ಬೀಳ್ಕೊಡುವುದೇ...? ಛೆ.... ಆದರೆ, ಅಷ್ಟರಲ್ಲಿ ಕೈ ಹಿಡಿದ ಗಂಡನ ನೆನಪಾಗಿ ತೆರಳಲು ಒಪ್ಪುತ್ತಾರೆ.

ಆಕೆ ವೆಂಕಟಮ್ಮ. ಸುಮಾರು 70 ವರ್ಷ ಹರೆಯ. ಇದೇ ಜೂನ್ 18 ರಂದು ಮಟಮಧ್ಯಾಹ್ನ ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಸಮುದ್ರಕ್ಕೆ ಹಾರಿದ ಮಹಿಳೆಯನ್ನು ಕಂಡು ತಕ್ಷಣ ಕಾರ್ಯಪ್ರವೃತ್ತರಾದ ಲೈಫ್ ಗಾರ್ಡ್ ಸಿಬ್ಬಂದಿಗಳು ಅವರನ್ನು ಮೇಲಕ್ಕೆತ್ತಿ ರಕ್ಷಿಸುತ್ತಾರೆ. ವಿಷಯ ವಿಚಾರಿಸಿದಾಗ ಒಂದಕ್ಕೊಂದು ತಾಳೆಯಾಗದ ಮಾತು, "ನನ್ನನ್ನು ಸಾಯಲು ಬಿಡಿ" ಎಂದು ಚೀರಾಡುತ್ತಿದ್ದಳು. ಆಕೆಯನ್ನು ಹಾಗೆಯೇ ಬಿಡುವುದು ಸಮಂಜಸವಲ್ಲವೆಂದರಿತ ಸಿಬ್ಬಂದಿಗಳು ಪಣಂಬೂರು ಪೊಲೀಸು ಠಾಣೆಗೆ ಸೇರಿಸಿದ್ದರು. ಪೊಲೀಸರು ವಿಚಾರಣೆ ನಡೆಸಲಾಗಿ ಆಕೆಯೊರ್ವ ಮಾನಸಿಕ ಅಸ್ವಸ್ಥೆ ಎಂಬುವುದು ಖಾತರಿಯಾಯಿತು. ತನ್ನ ಹೆಸರು ವೆಂಕಟಮ್ಮ, ಊರು ಬೆಂಗಳೂರು ಎಂದಷ್ಟೇ ಹೇಳುತ್ತಿದ್ದರು. ವಿಳಾಸ, ಸಂಬಂಧಿಕರ ಮಾಹಿತಿ ವಿಚಾರಿಸಿದರೆ ಮೌನಿಯಾಗುತ್ತಿದ್ದರು. ಪೇಚಿಗೆ ಬಿದ್ದ ಪೊಲೀಸರು ಕೊನೆಗೆ ವಾರೀಸುದಾರರಿಲ್ಲದ ಆ ಮಹಿಳೆಯನ್ನು ಸ್ನೇಹಾಲಯದ ಸಂರಕ್ಷಣೆಗೆ ಬಿಡಲು ತೀರ್ಮಾನಿಸಿದರು. ಹಾಗೆ, ಮಹಿಳಾ ಪೊಲೀಸರು ಅವರನ್ನು ಮಂಜೇಶ್ವರದ ಸ್ನೇಹಮನೆಗೆ ತಲುಪಿಸಿದ್ದರು.

 

 

 

ಅವರಿಗೆ ಆಶ್ರಯ, ಪ್ರೀತಿಯ ಆರೈಕೆ, ಯೇನಪೋಯ ಆಸ್ಪತ್ರೆಯಲ್ಲಿ ದಾಖಲು ಶುಶ್ರೂಷೆ ನೀಡಿದ ಫಲವಾಗಿ ಸಹಜ ಸ್ಥಿತಿಗೆ ಬಂದಾಗ ತನ್ನ ಪೂರ್ಣ ವಿಳಾಸ ತಿಳಿಸಿದ್ದರು. ಬೆಂಗಳೂರು ನಗರದ ಪೀಣ್ಯದಲ್ಲಿ ಅವರ ನಿವಾಸ. ಆದರೆ, ಮತಿ ಹೀನತೆಯಿಂದ ಸಹಜತೆಗೆ ಬಂದ ಅವರು ಹೇಳಿದ ಕಥೆಯು ಕರುಣಾಜನಕವಾಗಿತ್ತು.

ವೆಂಕಟಮ್ಮ ದಂಪತಿಗೆ ಮೂವರು ಹೆಣ್ಮಕ್ಕಳು. ಬಡ ಸಂಸಾರವಾಗಿದ್ದರೂ ಬಳುವಳಿಯಾಗಿ ಬಂದ ಅಲ್ಪ ಆಸ್ತಿಯಿತ್ತು. ಹೆಣ್ಮಕ್ಕಳು ಪ್ರಾಯಕ್ಕೆ ಬಂದಾಗ ತಕ್ಕ ರೀತಿಯಲ್ಲಿ ವಿವಾಹ ಮಾಡಿ ಕೊಡಲಾಯಿತು. ತಮಗೇನಿದ್ದರೂ ಮಕ್ಕಳಿಗಲ್ಲವೇ.... ಆಸ್ತಿಯನ್ನು ಉಳಿಸಿಯೇನು, ಮಕ್ಕಳೇ ತಮ್ಮ ಆಸ್ತಿಯಲ್ಲವೇ ಎಂದು ನಂಬಿದ ಆ ಮುಗ್ದ ದಂಪತಿಯು 15 ವರ್ಷಗಳ ಹಿಂದೆ ಸೊತ್ತನ್ನು ಮೂವರು ಮಕ್ಕಳ ಹೆಸರಿಗೆ ಹಂಚಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ..... ಬರಬರುತ್ತಾ ದಂಪತಿಗೆ ಮುಪ್ಪಾವರಿಸಿತು. ಸಾಲದ್ದಕ್ಕೆ ವೆಂಕಟಮ್ಮನ ಗಂಡ ಮಾರಕ ಮೂತ್ರಕೋಶ ಕಾಯಿಲೆ ಪೀಡಿತರೂ ಆಗಿ ನಿರಂತರ ಚಿಕಿತ್ಸೆಯೂ ಅನಿವಾರ್ಯವಾಯಿತು. ಪತಿಯನ್ನು ಹಿಡಿದು ಬಾಡಿಗೆ ಮನೆ ಸೇರಿದರು. ಹೇಗೋ ದಿನ ಖರ್ಚು ನಿಭಾಯಿಸುತ್ತಿದ್ದರು. ಬಾಡಿಗೆ ನೀಡಲು ಮಕ್ಕಳಿಗೆ ವಹಿಸಿದರೂ ಬಾಡಿಗೆ ನೀಡುವುದು ಬಿಡಿ, ಬರಬರುತ್ತಾ ತಾಯ್ತಂದೆ ಬದುಕಿದ್ದಾರೆಯೇ ಎಂದು ಅರಿಯಲು ಕೂಡಾ ಆ ಮಕ್ಕಳು ಮುಂದಾಗಿರಲಿಲ್ಲ. ಚಿಂತೆ ಮೂಡಿದು, ನಿದ್ದೆಯಿಲ್ಲದಾಯಿತು, ಮಾನಸಿಕ ಸ್ಥಿಮಿತ ತಪ್ಪಿ ಹೋಯಿತು.
ಹಾಗೊಂದು ದಿನ ಮನೆಯಿಂದ ಹೊರಬಂದ ವೆಂಕಟಮ್ಮ ರಸ್ತೆಯುದ್ದಕ್ಕೂ ನಡೆದೇ ಬಿಟ್ಟಿದ್ದರು. ಬಂದು ಸೇರಿದ್ದು ಮಂಗಳೂರಿನ ಪಣಂಬೂರಿಗೆ...... ಬದುಕಲ್ಲಿ ನಿರೀಕ್ಷೆ ಉಳಿದಿಲ್ಲ. ಸಾಯುವುದು ಲೇಸೆಂದು ಸಮುದ್ರಕ್ಕೆ ಹಾರಿದ ಅವರು ಮುಂದೆ ಕಣ್ತೆರೆದದ್ದು ಸ್ನೇಹಾಲಯದ ಮಡಿಲಲ್ಲಿ.................

ವೆಂಕಟಮ್ಮ ನೀಡಿದ ಮಾಹಿತಿಯರಿತು ಅವರ ದೂರದ ಸಂಬಂಧಿಯೂ ಆಗಿರುವ ಪೀಣ್ಯದ ಶಿವಗಂಗೆ ಗ್ರಾಮ ಪಂಚಾಯ್ತಿ ಸದಸ್ಯನಾದ ಯುವಕ ಇದೇ ಜುಲೈ ಎರಡರಂದು ಸ್ನೇಹಾಲಯಕ್ಕೆ ಬಂದಿದ್ದಾರೆ. ವೆಂಕಟಮ್ಮ ದಂಪತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯಿತ್ತು ಅವರನ್ನು ಕೂಡಿ ತೆರಳಿದ್ದಾರೆ. ಸ್ನೇಹಾಲಯ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರು ಬೆಂಗಳೂರಿನ ಹಿರಿಯನಾಗರಿಕ ಸೇವಾ ಕೇಂದ್ರಕ್ಕೂ ಮಾಹಿತಿ ರವಾನಿಸಿದ್ದು, ಅವರಿಗೆ ನ್ಯಾಯ ದೊರಕಿಸಿ ಕೊಡುವ ಬಗ್ಗೆ ಭರವಸೆ ದೊರೆತಿದೆ. ಹಾಗೆ, ವೆಂಕಟಮ್ಮ ಸುರಕ್ಷಿತವಾಗಿ ಊರು ಸೇರುವಂತಾಗಿದ್ದಾರೆ.

 

 

Add comment


Security code
Refresh

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]